ಹ್ಯಾಮಿಲ್ಟನ್, ಅಲೆಕ್ಸಾಂಡರ್
	1755-1804. ಅಮೆರಿಕದ ಪ್ರಸಿದ್ಧ ರಾಜಕೀಯ ಧುರೀಣ. 1755 ಜನವರಿ 11ರಂದು ವೆಸ್ಟ್‍ಇಂಡಿಸ್ ದ್ವೀಪಗಳಲ್ಲಿನ ನೆವಿಸ್ ಎಂಬಲ್ಲಿ ಜನಿಸಿದ. ಈತನ ತಂದೆ ಜೇಮ್ಸ್ ಹ್ಯಾಮಿಲ್ಟನ್, ತಾಯಿ ರಾಖೆಲ್ ಲೆವಿಯನ್. ಕೇವಲ ಹನ್ನೊಂದು ವರ್ಷದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಈತ ತಾಯಿಯ ಸಂಬಂಧಿಕರ ಬಳಿ ಬೆಳೆದು ವಿದ್ಯಾಭ್ಯಾಸವನ್ನು ಪಡೆದ. 1774ರಲ್ಲಿ ಈತ ನ್ಯೂಯಾರ್ಕಿನ ಕಿಂಗ್ಸ್ ಕಾಲೇಜನ್ನು ಸೇರಿದನಾದರೂ ಅಮೆರಿಕದ ಕ್ರಾಂತಿ ಈತನ ವಿದ್ಯಾಭ್ಯಾಸಕ್ಕೆ ತಡೆಯನ್ನೊಡ್ಡಿತು. 

	1776ರಲ್ಲಿ ಇವನು ನ್ರ್ಯಯಾರ್ಕಿನ ಪ್ರಾಂತೀಯ ಕಾಂಗ್ರೆಸ್‍ನ ಸೈನ್ಯ ಸೇರಿ, ಅನಂತರ ನಾಯಕನಾದ (1777-81). ಈತನ ಧೈರ್ಯ, ಸಾಹಸಗಳನ್ನು ಕಂಡು ಜಾರ್ಜ್ ವಾಷಿಂಗ್‍ಟನ್ ತನ್ನ ಆಪ್ತಕಾರ್ಯದರ್ಶಿಯಾಗಿ ನೇಮಿಸಿಕೊಂಡ. ಇವನು ಸಂಯುಕ್ತ ಸರ್ಕಾರವಾಗಬೇಕೆಂದು ಯತ್ನಿಸಿದ.  ಫೆಡರಲ್ ಸರ್ಕಾರದ ಪ್ರಸ್ತಾವನೆ ಬರೆದ (1786). ಅನಂತರ 1787ರಲ್ಲಿ ಫಿಲಿಡೆಲ್ಫಿಯದಲ್ಲಿ ನಡೆದ ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ನೀಡಿದ. ಅಮೆರಿಕದ ರಾಜ್ಯಾಂಗ ರಚನೆಯಲ್ಲಿ ಪ್ರಧಾನ ಪಾತ್ರಧಾರಿಯಾಗಿದ್ದ ಈತ 1789 ಸೆಪ್ಟೆಂಬರ್ 11ರಲ್ಲಿ ವಾಷಿಂಗ್‍ಟನ್ನನ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವನಾಗಿ ನೇಮಕಗೊಂಡು ಅನೇಕ ಗಮನಾರ್ಹ ಸುಧಾರಣೆಗಳನ್ನು ಜಾರಿಗೊಳಿಸಿದ. 1795ರಲ್ಲಿ ತನ್ನ ಪದವಿಗೆ ರಾಜಿನಾಮೆಯನ್ನಿತ್ತ ಈತ ನ್ಯೂಯಾರ್ಕಿನಲ್ಲಿ ವಕೀಲವೃತ್ತಿ ಆರಂಭಿಸಿದ. 

	1798ರಲ್ಲಿ ಫ್ರಾನ್ಸಿನ ವಿರುದ್ಧ ಯುದ್ಧದಲ್ಲಿ ಸೈನ್ಯದ ನಾಯಕನಾಗಿದ್ದ ಈತ ಒಂದು ವರ್ಷದ ಅನಂತರ (1800) ನಾಯಕ ಪದವಿಗೆ ರಾಜೀನಾಮೆ ನೀಡಿದ. 

	ಜಾನ್ ಆಡಮ್ಸ್(1735-1826) ಅಮೆರಿಕದ ಅಧ್ಯಕ್ಷನಾದಾಗ(1797-1801) ಈತ ಸರ್ಕಾರದಲ್ಲಿದ್ದ ತನ್ನ ಹಿಡಿತವನ್ನು ಕಳೆದುಕೊಂಡ. ಆಡಮ್ಸ್‍ನ ಮೇಲಿನ ಸೇಡು ತೀರಿಸಿಕೊಳ್ಳಲು ಅನೇಕ ಬಾರಿ ಗೌರವವನ್ನೂ ಕಳೆದುಕೊಂಡ. ಇವನು ಎಲಿಜಿಬತ್ ಸ್ಕೂೈಲೆರ್ ಎಂಬಾಕೆಯನ್ನು ವಿವಾಹವಾಗಿದ್ದ (1780). 1804 ಜುಲೈ 11ರಂದು ಬರ್ಗ್ ಎಂಬಾತನೊಡನೆ ನಡೆದ ದ್ವಂದ್ವ ಯುದ್ಧದಲ್ಲಿ ಗಾಯಗೊಂಡು ನಿಧನನಾದ.				
				(ಎಸ್.ಯು.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ